ಕತ್ತರಿಸುವುದು : ಗಿಯರು ಕತ್ತರಿಸುವುದು ಮತ್ತು ಮಾತೃಕೆಯನ್ನು (ಡೈ) ಕತ್ತರಿಸುವುದು ಎಂದು ಎರಡು ವಿಧಗಳಿವೆ (ಕಟಿಂಗ್).

 ಗಿಯರು ಕತ್ತರಿಸುವುದು 
ತಿರುಗುತ್ತಿರುವ ನಾಳಸಹಿತ (ಫ್ಲೂಟೆಡ್) ರೇಖೆಯ ಭ್ರಮಿಕರ್ತಕ (ಹಾಬ್) ನೇರ (ಸ್ಪರ್), ಕುಂಡಲಿನಿ (ಹೆಲಿಕಲ್) ಮತ್ತು ವರ್ಮ್ ಗಿಯರುಗಳನ್ನು ಕತ್ತರಿಸುವ ಕ್ರಿಯೆ. ಈ ವಿಧಾನದಲ್ಲಿ ಕಾಯಕ ಪದಾರ್ಥ (ಬ್ಲ್ಯಾಂಕ್) ಮತ್ತು ಕರ್ತಕಗಳು ಮಾಡುವ ತಲಾ ಒಂದೊಂದು ಪರಿಭ್ರಮಣ ಚಲನೆ ಹಾಗೂ ಅದೇ ಕಾಲದಲ್ಲಿ ಕರ್ತಕ ಮಾಡುವ ರೇಖೀಯ ಚಲನೆ-ಹೀಗೆ ಒಮ್ಮೆಗೇ ಮೂರು ಚಲನೆಗಳನ್ನು ಕಾಣಬಹುದು.
ಕ್ರಿಯೆ : ಮುಂದೆ ಗಿಯರು ಯಾವ ಜವದಲ್ಲಿ (ಸ್ಪೀಡ್) ಓಡಬೇಕೋ ಅದೆ ಜವದಲ್ಲಿ ಈಗ ಕಾಯಕಪದಾರ್ಥವನ್ನು ತಿರುಗಿಸಬೇಕು. ಸೂಕ್ತ ಜವದಲ್ಲಿ ತಿರುಗುತ್ತಿರುವ ಕರ್ತಕವು ಕಾಯಕಪದಾರ್ಥವನ್ನು ಒತ್ತಿ ಹಲ್ಲುಗಳನ್ನು ಕತ್ತರಿಸುತ್ತದೆ. ಈ ವಿಧಾನದಲ್ಲಿ ಉಷ್ಣ ಯಾವ ಒಂದು ಭಾಗದಲ್ಲಿಯೂ ಕೇಂದ್ರೀಕೃತವಾಗದೆ ಸಮನಾಗಿ ಹಂಚಲ್ಪಡುತ್ತದೆ.

 ಮಾತೃಕೆಯನ್ನು ಕತ್ತರಿಸುವುದು (ಡೈಹಾಬಿಂಗ್) 
ಗಡಸುಗೊಳಿಸಿದ ಉಕ್ಕಿನಲ್ಲಿ (ಹಾರ್ಡನ್ಡ್‌ ಸ್ಟೀಲ್) ನಮಗೆ ಬೇಕಾದ ಮಾತೃಕೆಯ ಪ್ರತಿಕೃತಿಯನ್ನು ಕೊರೆಯಬೇಕು. ಅನಂತರ ಇದನ್ನು ಪ್ರತಿಕೃತಿಗಿಂತಲೂ ಮೆದುವಾದ ಲೋಹದೊಳಗೆ ಅಧಿಕ ಒತ್ತಡದಲ್ಲಿ ದಬ್ಬಿದಾಗ, ಪ್ರತಿಕೃತಿಯು ಲೋಹವನ್ನು ಕತ್ತರಿಸಿಕೊಂಡು ಹೋಗುವುದರಿಂದ ಇಚ್ಛಿತ ಮಾತೃಕೆ ದೊರೆಯುತ್ತದೆ.                                                      (ಕೆ.ಆರ್.ಎಂ.ಒ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ